ಮೋಸ -
ದಗ, ವಂಚನೆ, ಕಪಟ ಈ ಎಲ್ಲ ಪದಗಳ ಅರ್ಥ ಕೊಡುವ ಒಂದು ಕ್ರಿಯೆ (ಚೀಟಿಂಗ್). ಈ ಕ್ರಿಯೆಯ ರೂಪ ಬಹುವಿಧ. ಕೆಲವೊಮ್ಮೆ ಈ ಕ್ರಿಯೆಯ ಸೂಕ್ಷ್ಮತೆಯಿಂದಾಗಿ ಅದು ವಂಚನೆಯೆ, ಮೋಸವೆ ಎಂಬುದನ್ನು ನಿರ್ಧರಿಸಬೇಕಾಗಿ ಬರುತ್ತದೆ. ಕಾನೂನನ್ನು ವಂಚಿಸುವ, ಅದರ ಹಿಡಿತದಿಂದ ನುಸುಳಿಕೊಳ್ಳುವ ಅವಕಾಶವೂ ಮೋಸಕ್ಕೆ ಉಂಟು. ಕೆಲವೇ ಮಾತುಗಳಲ್ಲಿ ಹೇಳುವುದಾದರೆ ಯಾರಾದರೂ ಇನ್ನೊಬ್ಬನಿಗೆ ವಂಚಿಸಿ ಕಪಟತನದಿಂದ ಅಥವಾ ಅಪ್ರಾಮಾಣಿಕತನದಿಂದ ಯಾವುದಾದರೂ ವಸ್ತುವನ್ನು ಯಾರಿಗಾದರೂ ಕೊಡುವಂತೆ ಮಾಡಿದರೆ ಅಥವಾ ಯಾವುದಾದರೂ ವಸ್ತುವನ್ನು ಇಟ್ಟುಕೊಳ್ಳುವಂತೆ ಪ್ರೇರೇಪಿಸಿದರೆ ಮತ್ತು ಯಾವುದಾದರೂ ವಿಚಾರವನ್ನು ಬಚ್ಚಿಡುವುದು ಹಾಗೂ ಉದ್ದೇಶಪೂರ್ವಕ ಒಬ್ಬನಿಂದ ಒಂದು ಕೆಲಸ ಮಾಡಿಸಿದರೆ ಅಥವಾ ಮಾಡದಂತೆ ಮಾಡಿದರೆ ಆ ಕೆಲಸ ಅಥವಾ ನಿಷ್ಕ್ರಿಯತೆ ಆ ಮನುಷ್ಯನ ಶರೀರ, ಮನಸ್ಸು, ಘನತೆ ಅಥವಾ ಸ್ವತ್ತಿಗೆ ಧಕ್ಕೆ ತಂದರೆ ಅಥವಾ ತರುವಂಥದ್ದಾದರೆ ಅದನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

	ಸುಳ್ಳಾದುದನ್ನು ನಂಬುವಂತೆ ಮಾಡುವುದು, ತಪ್ಪು ದಾರಿಗೆ ಎಳೆಯುವುದು ಇಲ್ಲದ ವಿಚಾರವನ್ನು ಇರುವುದೆಂದು ಹೇಳುವುದು ಅಂಗಡಿಯವರು ಅಳತೆಯಲ್ಲಿ ಕಡಿಮೆ ಮಾಡುವುದು ಸಾಮಾನುಗಳು ಉತ್ತಮತೆಯಲ್ಲಿ ಹೆಚ್ಚು ಕಡಿಮೆ ಮಾಡುವುದು ಮೋಸವೆನಿಸುವುದು. ಮಾಡಿದ ಕೆಲಸಗಳಿಂದ ಅಥವಾ ಸಂದರ್ಭಾನುಸಾರ ಆದ ಮೋಸವನ್ನು ಖಚಿತಪಡಿಸಬೇಕಾಗುತ್ತದೆ.

	ನ್ಯಾಯಸಮ್ಮತ ಹಕ್ಕಿಲ್ಲದೆ ತನಗೆ ಸೇರದ ಸ್ವತ್ತನ್ನು ಇಟ್ಟುಕೊಳ್ಳುವಂತೆ ಮಾಡುವುದು, ಧಕ್ಕೆ ತರುವಂತೆ ಕೆಲಸ ಮಾಡಿಸುವುದು ಅಥವಾ ಮಾಡದಂತೆ ತಡೆಯುವುದು, ಒಬ್ಬನು ಇನ್ನೊಬ್ಬನೆಂದು ಸೋಗು ಹಾಕಿ, ತಿಳುವಳಿಕೆಯಿದ್ದು ಒಬ್ಬನ ಬದಲಾಗಿ ಇನ್ನೊಬ್ಬನನ್ನು ಬದಲಿಗಿಟ್ಟು ತೋರಿಸುವುದೂ ವಂಚನೆಯಿಂದ ಸ್ವತ್ತನ್ನು ಕೊಡುವಂತೆ ಮಾಡುವುದು, ಬೆಲೆಯುಳ್ಳ ವಸ್ತುಗಳನ್ನು ಹೆಚ್ಚುಕಡಿಮೆ ಮಾಡಿಸಿದರೆ ಅಥವಾ ಸಂಪೂರ್ಣವಾಗಿ ನಾಶಗೈದರೆ ಅಥವಾ ಮೊಹರು ಮಾಡಿದವುಗಳನ್ನು ಕೊಡುವಂತೆ ಮಾಡಿದರೆ ಸಾಮಾನ್ಯ ಮೋಸಕ್ಕೆ ಹೇಳಿದ ಶಿಕ್ಷೆಗಿಂತ ಹೆಚ್ಚಿನ ಶಿಕ್ಷೆ (ಐ. ಪಿ. ಸಿ. ವಿಧಿ 417, 418, 420) ವಿಧಿಸಲಾಗುತ್ತದೆ.

	ಸಾಲಗಾರರಿಗೆ ಅಥವಾ ಬೇರೆಯವರೆ ಸಾಲಗಾರರಿಗೆ ಕಾನೂನುಪ್ರಕಾರ ಹಂಚಬೇಕಾದ ಸ್ವತ್ತನ್ನು ಅಪ್ರಾಮಾಣಿಕವಾಗಿ ಬಚ್ಚಿಟ್ಟರೆ ಅಥವಾ ಇನ್ನೊಬ್ಬನಿಗೆ ಕೊಟ್ಟರೆ ಮತ್ತು ಸರಿಯಾದ ಪ್ರತಿಫಲ ವಿನಾ ಪರಭಾರೆ ಮಾಡಿದರೆ ಅಥವಾ ಮಾಡುವಂತೆ ಮಾಡಿದರೆ ಸ್ವತ್ತಿನ ನ್ಯಾಯಪೂರ್ಣ ಹಂಚಿಕೆಯನ್ನು ತಡೆಯುವುದನ್ನು ಸಾಧಿಸಬಹುದೆಂದು ತಿಳುವಳಿಕೆಯಿದ್ದರೆ ಜುಲ್ಮಾನೆ ಸಹಿತ ಎರಡು ವರ್ಷಗಳ ಸಜೆ ಅಥವಾ ಜುಲ್ಮಾನೆ ವಿಧಿಸಬಹುದು (ವಿಧಿ 421). ಹಾಗೆಯೇ ದಿವಾಳಿ ಸಂಬಂಧದ ಮೋಸಗಳನ್ನು ಮುಂದಿಟ್ಟುಕೊಂಡು ಈ ಅಪರಾಧವನ್ನು 422 ರಿಂದ 424ರ ತನಕದ ವಿಧಿಗಳಲ್ಲಿ ಹೇಳಿದ ಅಪರಾಧಗಳನ್ನು ಐ. ಪಿ. ಸಿ. ಯಲ್ಲಿ ಅಳವಡಿಸಲಾಗಿದೆ. 

	(ನೋಡಿ- ಅಪಕೃತ್ಯ)
	(ನೋಡಿ- ಅಪರಾಧ)
		(ಕೆ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ